ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಯಕ್ಷತೂಣೀರದ ಮುಖವರ್ಣಿಕೆ ಪಾಠ

ಲೇಖಕರು :
ಎಂ.ನಾ. ಚಂಬಲ್ತಿಮಾರ್‌
ಶನಿವಾರ, ಒಕ್ಟೋಬರ್ 3 , 2015
ಒಕ್ಟೋಬರ್ 3, 2015

ಯಕ್ಷತೂಣೀರದ ಮುಖವರ್ಣಿಕೆ ಪಾಠ

ಮುಳಿಯಾರು : ತೆಂಕುತಿಟ್ಟು ಯಕ್ಷಗಾನದ ತವರೂರಾದ ಕಾಸರಗೋಡು ಪ್ರದೇಶದಲ್ಲಿ ರಚನಾತ್ಮಕವಾದ ಯಕ್ಷಗಾನೀಯ ಚಟುವಟಿಕೆಗಳಿಂದ ಪರಂಪರೆಯ ಬಳುವಳಿಯಾಗಿ ಬಂದ ಕಲಾಕೈಂಕರ್ಯಗಳನ್ನು ಮುಂದಿನ ಪೀಳಿಗೆಗೂ ಸಮರ್ಥವಾಗಿ ಹಸ್ತಾಂತರಿಸಬೇಕೆಂಬ ಧ್ಯೇಯ ದೊಂದಿಗೆ ಇತ್ತೀಚೆಗಷ್ಟೇ ಅಸ್ತಿತ್ವಕ್ಕೆ ಬಂದ ಮುಳಿಯಾರಿನ ಯಕ್ಷತೂಣೀರ ಸಂಪ್ರತಿಷ್ಠಾನ ವರ್ಷ ಪೂರೈಸುವ ಮುನ್ನವೇ ಸತತ ಚಟುವಟಿಕೆಗಳಿಂದ ಭರವಸೆ ಮೂಡಿಸಿದೆ. ನಾಳಿನ ಭವಿಷ್ಯವನ್ನು ದೃಷ್ಟಿಯಲ್ಲಿರಿಸಿಕೊಂಡು ಯಕ್ಷಗಾನ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಅದು ಚಟುವಟಿಕೆ ನಿರತ ವಾಗಿರುವುದು ಅತ್ಯಂತ ಗಮನಾರ್ಹ. ಈ ನಿಟ್ಟಿನಲ್ಲಿ ಮುಳಿ ಯಾರು ಸುಬ್ರಹ್ಮಣ್ಯ ದೇವಾಲಯದಲ್ಲಿ ಕಳೆದ ತಿಂಗಳು ಯಕ್ಷಗಾನ ವೇಷಗಳ ರಂಗಕ್ರಮಗಳ ಮಾಹಿತಿ ಶಿಬಿರ ನಡೆದರೆ ಈಗ ಗಡಿ ಅಭಿವೃದ್ಧಿ ಪ್ರಾಧಿಕಾರದ ಸಹಕಾರದೊಂದಿಗೆ ಯಕ್ಷಗಾನ ಮುಖವರ್ಣಿಕೆ ಶಿಬಿರವೂ ನಡೆದಿದೆ.

ಯಕ್ಷಗಾನದಲ್ಲಿಂದು ಮಕ್ಕಳು, ಮಹಿಳೆಯರು ಅತ್ಯಧಿಕ ಸಂಖ್ಯೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಒಂದು ಪ್ರದರ್ಶನಕ್ಕೆ ಬೇಕಾದಷ್ಟು ಕಲಿಸಿಕೊಟ್ಟದ್ದನ್ನು ಮಾಡಬಲ್ಲವರೇ ಹೊರತು, ಅದಕ್ಕಿಂತ ಹೆಚ್ಚು ಅವರು ನಿಪುಣರಲ್ಲ. ಆದರೆ ಕಲಿಕಾ ಹಂತದಲ್ಲೇ ರಂಗಕ್ರಮ ಮತ್ತು ಒಡ್ಡೋಲಗ ಕ್ರಮಗಳನ್ನೆಲ್ಲ ಕಲಿಸಿ ಪಕ್ವಗೊಳಿಸುವುದು ಯಕ್ಷತೂಣೀರ ಸಂಪ್ರತಿಷ್ಠಾನದ ಉದ್ದೇಶ. ಈ ನಿಟ್ಟಿನಲ್ಲಿ ನಡೆದ ಎರಡನೆಯ ಹೆಜ್ಜೆಯೇ ಬಣ್ಣಗಾರಿಕೆ ಶಿಬಿರ. ಸೆ.19ರಂದು ಮುಳಿಯಾರು ಕ್ಷೇತ್ರ ಕೇಂದ್ರೀಕರಿಸಿ ನಡೆದ ಶಿಬಿರ ಒಂದು ಅನನ್ಯ ಅನುಭವ. ಈ ತನಕ ಹಿರಿಯರಿಂದ ಬಣ್ಣ ಮೆತ್ತಿಸಿಕೊಳ್ಳುತ್ತಿದ್ದ ಎಳೆಯ ಕಲಾವಿದರು ಅಂದು ತಾವೇ ಬಣ್ಣ ಬರೆಯುವುದನ್ನು ಕಲಿಯುವ ಸಂಭ್ರಮ ಅಲ್ಲಿ ನೆಲೆಸಿತ್ತು. ಮೊದಲ ಹಂತದಲ್ಲಿ ರಾಜವೇಷವೊಂದರ ಮುಖವರ್ಣಿಕೆಯನ್ನು ಪ್ರಾಯೋಗಿಕವಾಗಿ ಆಯ್ದುಕೊಂಡು ಮುಖ ಬರವಣಿಗೆ ಕಲಿಸ ಲಾಯಿತು. ಪಡ್ರೆ ಚಂದು ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ಸಂಸ್ಥಾಪಕ ಗುರು ಸಬ್ಬಣಕೋಡಿ ರಾಮ ಭಟ್‌ ಮತ್ತು ಖ್ಯಾತ ಕಲಾವಿದ ಮಾಧವ ಪಾಟಾಳಿ ನೀರ್ಚಾಲು ಬಣ್ಣ ಬರೆಯುವ ವಿಧಾನಗಳನ್ನು ಪ್ರಾತ್ಯಕ್ಷಿಕೆ, ವಿಶ್ಲೇಷಣೆ ಸಹಿತ ನಡೆಸಿಕೊಟ್ಟರು.

ಪ್ರಾಥಮಿಕವಾಗಿ ವಿದ್ಯಾರ್ಥಿಯೊಬ್ಬನ ಮುಖಕ್ಕೆ ತೆಂಕಣ ರಾಜವೇಷವೊಂದರ (ದೇವೇಂದ್ರ, ಅರ್ಜುನ ಇತ್ಯಾದಿ) ಮುಖವರ್ಣಿಕೆ ಬರೆದು ಅದನ್ನು ಪ್ರದರ್ಶನಕ್ಕಿರಿಸಲಾಯಿತು. ಇದೇ ವೇಳೆ ಶಿಬಿರಾರ್ಥಿಗಳೆಲ್ಲರೂ ಅದನ್ನೇ ನೋಡಿ ತಮ್ಮ ಮುಖದಲ್ಲಿ ತಾವೇ ಬರೆಯಲು ನಿರ್ದೇಶಿಸಲಾಯಿತು. ಬಣ್ಣದ ಬಳಕೆ, ಬರವಣಿಗೆಯ ವಿಧಾನ ಇತ್ಯಾದಿಗಳನ್ನು ಶಿಬಿರ ನಿರ್ದೇಶಕರು ತಿಳಿಸಿದಂತೆಯೇ ಶಿಬಿರಾರ್ಥಿಗಳು ಬರೆದರು. ವೃತ್ತಿಮೇಳದ ಕಲಾವಿದರಿಂದ ಮೊದಲ್ಗೊಂಡು ಗೃಹಿಣಿಯರೂ ಕೂಡ ಈ ಶಿಬಿರದಲ್ಲಿ ಪಾಲ್ಗೊಂಡದ್ದು ವಿಶೇಷ. ಪೆರ್ಲ, ನೀರ್ಚಾಲು, ಮುಳ್ಳೇರಿಯ ಪ್ರದೇಶ ವಲ್ಲದೇ ದಕ್ಷಿಣಕನ್ನಡದ ವಿವಿಧೆಡೆಗಿನ ವಿದ್ಯಾರ್ಥಿಗಳೂ ಸೇರಿ ಸುಮಾರು 30ರಷ್ಟು ಶಿಬಿರಾರ್ಥಿಗಳು ಬಣ್ಣದ ಬರವಣಿಗೆಯ ಬಾಲಪಾಠಗಳನ್ನು ಅರಿಯಲು ಆಗಮಿಸಿದ್ದರು. ಮುಖವರ್ಣಿಕೆ ನೋಡಿ ತಾವೇ ಬರೆಯುವುದು ಮತ್ತು ಯಾವುದನ್ನೂ ನೋಡದೇ ತಮ್ಮಿಷ್ಟದ ವೇಷದ ಮುಖವನ್ನು ತಂತಮ್ಮ ಮುಖಗಳಲ್ಲಿ ತಾವೇ ಬರೆಯುವುದು ಹೀಗೆ ಎರಡು ಹಂತಗಳ ಬರವಣಿಗೆ ಶಿಬಿರ ಶಿಬಿರಾರ್ಥಿಗಳಿಗೆ ಮುಖವರ್ಣಿಕೆಯ ಬಾಲಪಾಠವನ್ನೊದಗಿಸಿದೆ.

ತೆಂಕಣ ಯಕ್ಷಗಾನದ ಪ್ರತಿಯೊಂದು ಬಣ್ಣಗಳ ಬಗ್ಗೆ ಮತ್ತು ವೇಷರಚನಾ ಕೌಶಲ್ಯದ ಬಗ್ಗೆ ಪ್ರತೀ ತಿಂಗಳು ಶಿಬಿರ ಏರ್ಪಡಿಸಿ ಆಸಕ್ತ ವಿದ್ಯಾರ್ಥಿಗಳಿಗೆ ಉಚಿತವಾಗಿ ಮಾಹಿತಿ ಶಿಕ್ಷಣ ನೀಡುವುದು ಶಿಬಿರದ ಉದ್ದೇಶ. ಶಿಬಿರದಲ್ಲಿ ಪಾಲ್ಗೊಂಡು ಬಣ್ಣ-ವೇಷಗಾರಿಕೆಗಳನ್ನು ಕಲಿತ ಶಿಬಿರಾರ್ಥಿಗಳಿಂದಲೇ ಯಕ್ಷತೂಣೀರ ಸಂಪ್ರತಿಷ್ಠಾನದ ವಾರ್ಷಿಕೋತ್ಸವಕ್ಕೆ ಯಕ್ಷಗಾನ ಪ್ರದರ್ಶನ ನೀಡುವುದನ್ನು ಕೂಡ ಘೋಷಿಸಲಾಗಿದೆ.

ವಿಶೇಷ ಎಂದರೆ ಶಿಬಿರದ ಸಮಾರೋಪದ ಸಲುವಾಗಿ ಯಕ್ಷಗಾನದಲ್ಲಿ ಕಂಡುಬರುವ ಬಣ್ಣದ ಬರವಣಿಗೆಯ ವೈರುಧ್ಯಗಳ ಕುರಿತಾದ ಜಿಜ್ಞಾಸೆಗಳ ಸಂವಾದ ನಡೆಯಿತು. ಕಲಾವಿದ ಮಾಧವ ಪಾಟಾಳಿ ನೀರ್ಚಾಲು ಅವರೊಂದಿಗೆ ನಡೆದ ಸಂವಾದದಲ್ಲಿ ಬರವಣಿಗೆಯ ವಿವಿಧ ಮಜಲು ಮತ್ತು ವೈರುಧ್ಯಗಳ ಕುರಿತು ಶಿಬಿರಾರ್ಥಿಗಳು ಮಾಹಿತಿ ಸಂಗ್ರಹಿಸಿದರು. ಯಕ್ಷಗಾನದ ಮುಖಬರವಣಿಗೆಯೆನ್ನುವುದು ಕಲಾಕ್ಷೇತ್ರದಲ್ಲಿ ತಾವು ನಿರಂತರ ಆಸಕ್ತಿಯಿಂದ ತೊಡಗಿಸಿಕೊಂಡರೆ, ಅಧ್ಯಯನಶೀಲರಾದರೆ ಮಾತ್ರ ಒಲಿಯುವುದಲ್ಲದೇ ಅದನ್ನು ಪರಿಪೂರ್ಣ ಕಲಿಸಿಕೊಡುವ ಕ್ರಮವಿಲ್ಲ. ಹಿರಿಯ ಕಲಾವಿದರು ಮುಖ ಬರೆಯುವುದನ್ನು ನೋಡಿಯೇ ಕಿರಿಯ ಕಲಾವಿದರು ತಯಾರಾದ ಪದ್ಧತಿ. ಆದರೆ ಹವ್ಯಾಸಿ ಮತ್ತು ಮಕ್ಕಳ-ಮಹಿಳಾ ಯಕ್ಷಗಾನದಲ್ಲಿ ಸ್ವಯಂ ಮುಖ ಬರವಣಿಗೆಯ ದಿನಗಳು ಬರಬೇಕೆಂಬ ಕಾಳಜಿಯೇ ಯಕ್ಷತೂಣೀರ ಸಂಪ್ರತಿಷ್ಠಾನದ್ದು. ಈ ತನಕ ಯಾರೂ ಗಮನಿಸಿ ಕ್ರಿಯಾಶೀಲರಾಗದ ಕಾಯಕದತ್ತ ಗಮನ ಹರಿಸಿದ ಕಾಳಜಿಗೆ ಅಭಿನಂದನೆಗಳು ಸಲ್ಲಲೇಬೇಕು.



ಕೃಪೆ : udayavani


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ